ದುಡಿಯುವ ಕೈಗಳಿಗೆ ಹತ್ತು ಬೆರಳುಗಳಿರುವಾಗ ಬೆರಳುಗಳಿಗೆ ಚಿನ್ನದ ಉಂಗುರವಿಲ್ಲವೆಂದು ನೋಯಬಾರದು.
ನಮ್ಮ ತನು, ಮನ, ಬುದ್ಧಿಯ ಶಕ್ತಿ ಅಗಾಧವಾದುದು. ಕಣ್ಣುಗಳು
ಸಣ್ಣವುಗಳಾದರೂ ವಿಶಾಲ ವಿಶ್ವವನ್ನೆಲ್ಲ ನೋಡಬಲ್ಲವು. ಕೈಗಳು ರಾಜಾರವಿವರ್ಮನಂತೆ ಅಮರ ಚಿತ್ರಕಲಾಕೃತಿಗಳನ್ನೇ ನಿರ್ಮಿಸಬಲ್ಲವು.
ಕಾಲುಗಳು ಸಮಗ್ರ ಪ್ರಪಂಚವನ್ನೇ ಪರ್ಯಟನ ಮಾಡಬಲ್ಲವು. ಬುದ್ಧಿಯಂತೂ ವಿಶ್ವದ ಆದ್ಯಂತವನ್ನೆಲ್ಲಾ ಅರಿಯಬಲ್ಲುದು. ಇನ್ನುಳಿದ ಅವಯವಗಳ
ಸಾಮರ್ಥ್ಯವು ಅವರ್ಣನೀಯ !
ಹೀಗಿದ್ದೂ ನಾವು
ಬಡವರಂತಿರುವುದಕ್ಕೆ ಕಾರಣವೆಂದರೆ ನಮ್ಮ ಅಜ್ಞಾನ ! ಮಾಂಸದ ಮುದ್ದೆಯಂತಿರುವ ಮಗುವನ್ನು ಮಹಾಮಾನವನನ್ನಾಗಿ ಬೆಳೆಸುವ ತಾಯಿಯ ಹೃದಯ ಅದೆಷ್ಟು ವಿಶಾಲ ! ತಾಯಿ ಮುಟ್ಟಿದ ತೊಟ್ಟಿಲ ಮಗುವಿನ ಬಾಳು ಬಂಗಾರವಾಗುವಾಗ ಆ ತಾಯಿಯ ಕೈಗಳು ಪರುಷವಲ್ಲವೆ ?! ಭಾರತ ದೇಶದಲ್ಲಿರುವಂಥ ನೆಲ, ಜಲ, ಗಾಳಿ, ಬೆಳಕಿನ ಸೌಕರ್ಯ ಇನ್ನೆಲ್ಲಿಯೂ ಇಲ್ಲ.
ಆದರೂ ನಾವು ಬಡವರೆಂದುಕೊಂಡಿದ್ದೇವೆ.
ಅದಕ್ಕೆಂದೆ ಓರ್ವ ವಿದೇಶಿ ವಿದ್ವಾಂಸರು ಹೇಳಿದರು- “ಭಾರತವು ಸಿರಿವಂತವಾಗಿದೆ ಆದರೆ ಭಾರತೀಯರು ಬಡವರಾಗಿದ್ದಾರೆ”. ಇದೇ ದೇಶದಲ್ಲಿ ಅದೆಂಥ ವೀರರು, ಧೀರರು, ಸಂತರು, ಶರಣರು ಬದುಕಿದರು.ಅದೇ ಶಕ್ತಿ, ಭಕ್ತಿ, ನಮ್ಮಲ್ಲಿಯೂ ಇದೆ. ಇದನ್ನರಿಯದೆ ನಾವು – “ಅವರು ನಮ್ಮ ದೇಶವನ್ನು ಅಷ್ಟು ವರ್ಷ ಆಳಿದರೂ ಇವರು ಇಷ್ಟು ವರ್ಷ
ಆಳಿದರು ನಾವು ಆಳಿಸಿಕೊಳ್ಳಲಿಕ್ಕೇ ಬಂದವರು’ ಎಂದು ಹೇಳುವುದು
ಹೇಗೆ ಸರಿಯಾಗುತ್ತದೆ?
ದುಡಿಯುವ ಕೈಗಳಿಗೆ ಹತ್ತು ಬೆರಳುಗಳಿರುವಾಗ ಬೆರಳುಗಳಿಗೆ ಚಿನ್ನದ ಉಂಗುರವಿಲ್ಲವೆಂದು ನೋಯಬಾರದು.
ಎಲ್ಲರಿಗೂ ಉಂಗುರ ಮಾಡುವ ಅಕ್ಕಸಾಲಿಗನಲ್ಲಿ ಉಂಗುರವಿರುತ್ತದೆಯೇ? ಹೂವಿನಲ್ಲಿ ಮುಳ್ಳಿರುವುದು ಹೂವಿನ ಸಂರಕ್ಷಣೆಗೆ ವಿನಾ ಯಾರಿಗೂ ನೋಯಿಸುವುದಕ್ಕಲ್ಲ. ಪ್ರಪಂಚದಲ್ಲಿರುವ ಕೆಲವೊಂದು ಏರುಪೇರುಗಳು ಪ್ರಪಂಚದ ಸಂರಕ್ಷಣೆಗೆ ವಿನಾ ಸಂಹಾರಕ್ಕಲ್ಲ.
ಇಂದು ಕೆಲವರು ಸರಿಯಾದ ರಸ್ತೆಯಿಲ್ಲ ದೀಪವಿಲ್ಲವೆಂದು ದೂರುತ್ತಾರೆ. ಶತಮಾನಗಳ ಹಿಂದೆ ಏನೂ
ಇಲ್ಲದಾಗಲೂ ಎಷ್ಟೊಂದು ನೆಮ್ಮದಿಯಿಂದ ಇದ್ದರಲ್ಲವೆ? ಮನೆಯಲ್ಲಿ ತಾಯಂದಿರು ಅಮೃತ ಸಮಾನ ಹಾಲುಕೊಟ್ಟಾಗ ವಿಷಸದೃಶ ಹೆಂಡ ನೆನೆವುದು ಸರಿಯೆ ? ನಾವು ಬದುಕಿರುವ ಭೂತಾಯಿಯ ಮಹಿಮೆ
ಅರಿತರೆ ಇದುವೇ ಭೂಕೈಲಾಸ ! ಇದುವೆ ನೆಲದ ಮರೆಯ ನಿಧಾನ. ಈ ಅರಿವೇ ಆದರ್ಶ ಜೀವನದ ಸಂಜೀವಿನಿ !!
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಮಾಲಿಕೆಯಿಂದ.
